By Dr.Tharun K G
ಅಮ್ಮನೇನೋ ಬಂದಳು
ಹೆದರಿ ಹದಿನಾರಕೆ ;
ಬೇಡದ ಕಾಡಿಗೆ ,
ಕೊರಳ ಒಡ್ಡಿ ಕೇಡಿಗೆ
ವರುಷ ಕಳೆವುದರಲ್ಲಿ
ಬಂದೆ ನಾನವಳ ಒಡಲಿಗೆ
ಅವನು ಕುಡುಕನೋ ಕಟುಕನೋ
ಕಾಣೆ ನಾನು ಇಂದಿಗೂ ,
ಎಸೆದು ಹೋದನಂತೆ ಉಗಿದು
ನಾನು ಅವನಂತಲ್ಲವೆಂದು
ಅಮ್ಮನಾದಳಾಗ ಒಂಟಿ
ಮಡಿಲಲ್ಲಿ ನನ್ನ ತಬ್ಬಿ ಗಟ್ಟಿ ,
ಉಸಿರ ಹಿಡಿದು ಅಳುವ ನುಂಗಿ
ಬರದ ಹಾಲ ಹಿಂಡಿ ಕುಡಿಸಿ ,
ಬೇಡಿ ತಿಂದು ಉಳಿದ ರೊಟ್ಟಿ
ಅಲೆದಳಂತೆ ಬೀದಿ-ಬೀದಿ
ಹರಿದ ಸೀರೆ ತೂತು ರವಿಕೆ
ಆಸೆಬುರುಕ ಭ್ರಮಿತ ಜನಕೆ ,
ಹೆದರಿ ಓಡಿ ಓಡಿ ದಣಿದು
ಬಿದ್ದಳಂತೆ ಒಮ್ಮೆ ಕುಸಿದು
ಹೆಗಲಲ್ಲಿದ್ದ ನಾನು ಬಿದ್ದು
ಅಳುತ ಅವಳ ತಬ್ಬಿಕೊಂಡು
ಎದೆಯ ಬಡಿದು ಮುತ್ತನಿಟ್ಟು
ಕರೆದು ಕರೆದು ಕೂಗಿದೆ
ಏಳಳು ಅವಳೇಳಳು
ಮರೆತಳೇಕೆ ನನ್ನನು,
ನನ್ನ ಬಿಟ್ಟು ಹೋದಳು
ಬರಳು ಮತ್ತೆ ಬಾರಳು
ಮುಂದೊಮ್ಮೆ
ನಾನೂ ಅವಳಾಗುವೆ!!
ಮೂರುಗಂಟು ಬಿಗಿದು
ದೂಡಬೇಡಿ ಬಾವಿಗೆ,
ಕಳಿಸಿ ನನ್ನ ಶಾಲೆಗೆ
ತರುವೆ ಕೀರ್ತಿ ನಾಡಿಗೆ
ನನ್ನ ಆಟ ಪಾಠ ಕಂಡು
ನಲಿವಳವಳು ಮೊದಲಿಗೆ.